ದಿನಮಣಿ
ಒಂದು ತಮಿಳು ದಿನಪತ್ರಿಕೆ. 1934ರಲ್ಲಿ ಆರಂಭವಾಯಿತು. ಪ್ರಕಟನೆಯ ಪ್ರಾರಂಭದಿಂದಲೇ ಈ ಪತ್ರಿಕೆಯ ಪ್ರಸಾರ ಮುನ್ನೆಗೆಯಿತು. ಕೇವಲ ಒಂದು ತಿಂಗಳಿನಲ್ಲಿ ಇತರ ಎಲ್ಲ ಸಮಕಾಲೀನ ಪತ್ರಿಕೆಗಳ ಪ್ರಸಾರವನ್ನೂ ಮೀರಿಸಿತು. ಇದಕ್ಕೆ ಪತ್ರಿಕೆಯ ಬಿಡಿಪ್ರತಿಯ ಸುಲಭ ಬೆಲೆಯೂ ಸಂಪಾದಕೀಯ ಲೇಖನ ಮತ್ತು ಸುದ್ದಿಗಳ ಬರವಣಿಗೆಯ ನೇರ ಸರಳ ಶೈಲಿಯೂ ಮುಖ್ಯ ಕಾರಣಗಳು. ಈ ಪತ್ರಿಕೆಯ ಸ್ಥಾಪಕರು ಎಸ್. ಸದಾನಂದ್. ಮೊದಲು ಫ್ರೀ ಪ್ರೆಸ್ ಆಫ್ ಇಂಡಿಯ ಗುಂಪಿನ ಪತ್ರಿಕೆಯಾಗಿದ್ದ ದಿನಮಣಿ ಅನಂತರ ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕಾ ಸರಣಿಯಲ್ಲಿ ಸೇರ್ಪಡೆ ಆಯಿತು. ಟಿ.ಎಸ್.ಚೊಕ್ಕಲಿಂಗಮ್ ದಿನಮಣಿಯ ಪ್ರಥಮ ಸಂಪಾದಕರು. ಆರಂಭದಲ್ಲಿ ದಿನಮಣಿಯ ಬೆಲೆ ಆರು ಪೈ. ಬಹುಕಾಲದಿಂದ ಪ್ರಕಟವಾಗುತ್ತಿದ್ದ ಇತರ ಪತ್ರಿಕೆಗಳು ಈ ಸ್ಪರ್ಧೆಯನ್ನೆದುರಿಸಲಾರದಾದವು. ಇಂಡಿಯ ಪತ್ರಿಕೆ ಈ ಸ್ಪರ್ಧೆಯಲ್ಲಿ ಸೋತು ದಿನಮಣಿಯಲ್ಲಿ ವಿಲೀನಗೊಂಡಿತು. ಎರಡನೆಯ ಮಹಾಯುದ್ಧದ ಆರಂಭಕಾಲದಲ್ಲಿ ಇದ್ದ ಎರಡು ಪ್ರಮುಖ ತಮಿಳು ದೈನಿಕಗಳ ಪೈಕಿ ದಿನಮಣಿ ಒಂದು; ಮತ್ತೊಂದು ಸ್ವದೇಶಮಿತ್ರನ್.

ಚೊಕ್ಕಲಿಂಗಮ್ 1943ರಲ್ಲಿ ದಿನಮಣಿಯೊಡನೆ ಸಂಬಂಧ ತ್ಯಜಿಸಿದರು. ದಿನಮಣಿ ಪ್ರಗತಿಪಥದಲ್ಲಿ ಮುನ್ನಡೆಯಲು ಅದರ ಮತ್ತೊಬ್ಬ ಸಂಪಾದಕ ಎ. ಎಸ್. ಶಿವರಾಮನ್ ಕಾರಣ. ಸ್ಥಳೀಯ ಮತ್ತು ಪ್ರಾದೇಶಿಕ ಸುದ್ದಿಗಳಿಗೆ ಇವರು ಆದ್ಯತೆ ನೀಡಿ ಸಾಮಾನ್ಯ ಓದುಗರನ್ನು ಆಕರ್ಷಿಸಿದರು. ಶಿವರಾಮನ್ ತಮಿಳು ನಾಡು ಪತ್ರಿಕೆಯ ಸಂಪಾದಕರಾಗಿ ಭಾರತೀಯ ಭಾಷಾ ಪತ್ರಿಕೋದ್ಯಮವನ್ನು ಚೆನ್ನಾಗಿ ಅರಿತಿದ್ದರು. 1932ರಲ್ಲಿ ಪ್ರಕಟವಾಗುತ್ತಿದ್ದ ಗಾಂಧೀ ತ್ರೈವಾರ ಪತ್ರಿಕೆಯ ವ್ಯವಸ್ಥಾಪಕರಾಗಿ ಮತ್ತು ಸಂಪಾದಕೀಯ ಸಹಾಯಕರಾಗಿ ಸೇವೆ ಸಲ್ಲಿಸಿದ್ದರು. ಅವರ ಅನುಭವದ ಫಲವಾಗಿ ದಿನಮಣಿ ಉತ್ತಮ ಮಟ್ಟದ ದೈನಿಕವಾಯಿತು. ದಿನಮಣಿಯ ಸುದ್ದಿ ಸಂಪಾದನೆಯ ಹೊಸ ಶೈಲಿ ತಮಿಳು ದಿನಪತ್ರಿಕೆಗಳ ಸುದ್ದಿ ಬರಹದಲ್ಲಿ ಹೊಸ ಹಾದಿ ತೋರಿಸಿತು. ವಿಮರ್ಶಾತ್ಮಕ ವರದಿಗಳು ಓದುಗರಿಗೆ ರುಚಿಸಿದವು. ಅದರ ಸಾಪ್ತಾಹಿಕವಾದ ದಿನಮಣಿ ಕದಿರ್ ದಿನಮಣಿಯಷ್ಟೇ ಜನಪ್ರಿಯವಾಗಿದೆ.

ದಿನಮಣಿ ದಿನಪತ್ರಿಕೆ ಈಗ ಎಕ್ಸ್‍ಪ್ರೆಸ್ ಪಬ್ಲಿಕೇಷನ್ಸ್ ಮಧುರೈ ಲಿ., ಸಂಸ್ಥೆಯ ಮಾಲಿಕತ್ವಕ್ಕೆ ಒಳಪಟ್ಟು ಚೆನ್ನೈ, ಮಧುರೈ, ಕೊಯಮತ್ತೂರು, ತಿರುಚಿ ಕೇಂದ್ರಗಳಿಂದ ಏಕಕಾಲದಲ್ಲಿ ಪ್ರಕಟವಾಗುತ್ತಿದೆ.
(ಕೆ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ